Tuesday, December 28, 2010

ಕುವೆಂಪು - ಒಂದು ಸ್ಮರಣೆ

ನಾಳೆ ಡಿಸೆಂಬರ್ 29 . ನಮ್ಮ ನೆಚ್ಚಿನ ಕುವೆಂಪು ಅವರ ಜನ್ಮದಿನ . ಈ ಸುದಿನದಂದು ಕುವೆಂಪು ಅವರ ಒಂದು ಘಟನೆ ನೆನಪು ಮಾಡಿಕೊಳ್ಳುವ ಚಿಕ್ಕ ಪ್ರಯತ್ನ. ಕುವೆಂಪುರವರು ಸಮಾರಂಭವೊಂದರಲ್ಲಿ ಭಾಗವಹಿಸಿದ್ದಾಗ ಸ್ವಾಗತ ಭಾಷಣಕಾರರು " ಕುವೆಂಪುರವರು ಇಲ್ಲಿ ಹುಟ್ಟದೆ ಇನ್ನೆಲ್ಲಿಯಾದರೂ ಹುಟ್ಟಿದ್ದರೆ ಸಾಮಾಜಿಕವಾಗಿ ,ರಾಜಕೀಯವಾಗಿ , ಆರ್ಥಿಕವಾಗಿ ಅವರ ಸ್ಥಾನಮಾನ ಇನ್ನೂ ಉತ್ತಮವಾಗಿರುತಿತ್ತು " ಎಂದು ಪ್ರಸ್ತಾಪಿಸಿದ್ದರು . ಕುವೆಂಪುರವರು ಅದಕ್ಕೆ ಉತ್ತರಿಸುತ್ತ " ಅವರ ದ್ರಷ್ಟಿಯಲ್ಲಿ ಜೀವನದ ಅದರ್ಶವೆಂದೆರೆ ಏನಂದು ನನಗೆ ತಿಳಿಯದು . ನಾನು ಇಲ್ಲಿ ಹುಟ್ಟದೆ , ಇಲ್ಲಿ ಇರದೇ , ಬೇರೆ ಕಡೆ ಹುಟ್ಟಿದ್ದರೆ , ಬದುಕಿದ್ದರೆ , ಇದಕ್ಕಿಂತ ಉತ್ತಮ ಸ್ಥಾನ ದೊರೆಯುತ್ತಿರಲಿಲ್ಲ . ನನಗೆ ಇಲ್ಲಿ ಈಗ ಏನು ದೊರೆತಿದೆಯೋ ಅದು ಇನ್ನೆಲ್ಲಿಯೂ ದೊರೆಯದು . ಪೇಚಾಟ , ಅಲೆದಾಟ ಎಲ್ಲೆಲ್ಲಿಯೂ ಇದೆ ; ವ್ಯಕ್ತಿಯಲ್ಲಿದೆ ; ಜನಾಂಗ ಜನಾಂಗದಲ್ಲಿದೆ . ಇದಕ್ಕೆ ಅತೃಪ್ತಿ, ಅಹಂಕಾರ ಮತ್ತು ಪ್ರತಿಷ್ಠಾಮೂಲವಾದ ಸ್ಪರ್ಧೆಗಳೇ ಕಾರಣ .ಇವು ಒಳಗಡೆ ಸೇರಿಬಿಟ್ಟರೆ , ಎಲ್ಲಿರಲಿ , ಏನೇ ಸ್ಥಾನಮಾನ ಇರಲಿ , ತೃಪ್ತಿ ಎಂದೆಂದಿಗೂ ಲಭಿಸುವುದಿಲ್ಲ . ಕನ್ನಡ ಕವನಗಳ ತುತ್ತೂರಿ ಲಂಡನ್ ತನಕ , ಹವಾಯ್ ದ್ವೀಪಗಳ ತನಕ ಹೋಗುವುದು ಬೇಡ . ಅವನ್ನು ಇಲ್ಲಿಯವರು ನಮ್ಮ ಸುತ್ತಮುತ್ತಣದವರು ಓದಿ ಸಂತೋಷಪಡಲಿ ,ಆಗ ಬರೆದವನಿಗೆ ಸಂತೋಷವಾಗುತ್ತದೆ ಜೀವನ ಸಾರ್ಥಕವಾಗುತ್ತದೆ " ಎಂದರಂತೆ .

ಮುಗಿಸುವ ಮುನ್ನ ಕುವೆಂಪು ವಿರಚಿತ ಪದ್ಯವೊಂದರ ಸಾಲು

ಅದರರ್ಥಗಿರ್ಥಗಳು ಸ್ರಷ್ಟಿಕರ್ಥನಿಗಿರಲಿ
ವ್ಯರ್ಥ ಜಿಜ್ನಾಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳು
ಒಂದಾಗಿ ಮುಂದುವರೆಯುವಾ ಯಾವ ಜನ್ಮದ ಮ್ಯೆತ್ರಿ

Wednesday, December 8, 2010

ಸಿದ್ಧಯ್ಯನ ಲೋಟ

ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಮನೆಯಲ್ಲಿ ಒಂದು ಉದ್ಧವಾದ ಸ್ಟೀಲ್ ಲೋಟವಿತ್ತು ,ಅದರ ಕೆಳಭಾಗ ಸ್ವಲ್ಪ ಅಪ್ಪಚ್ಚಿಯಾಗಿತ್ತು. ಅಮ್ಮ ಆ ಲೋಟದಲ್ಲಿ ಕಾಫಿ ಯಾ ನೀರನ್ನು ನಮ್ಮ ಮನೆಯ ಹೂಟಿ ಆಳು (ಗೆದ್ದೆ ಹೂಳಲು ಬಳಸುವ ಎಮ್ಮೆಗಳನ್ನು ಸಂಭಾಳಿಸುವವರಿಗೆ ನಮ್ಮ ಕಡೆ ಈ ಹೆಸರಿನಿಂದ ಕರೆಯುತ್ತಾರೆ ) ಸಿದ್ಧಯ್ಯನಿಗೆ ಮಾತ್ರ ಕೊಡುತಿದ್ದರು. ಬೇರೆ ಯಾವ ಕೆಲಸದವರಿಗೂ , ನಾನು ಎಷ್ಟು ಬೇಡಿದರೂ ನನಗೂ ಅದರಲ್ಲಿ ಏನು ಕೊಟ್ಟ ನೆನಪು ನನಗಿಲ್ಲ. ಅಸ್ಪ್ರಶ್ಯತೆ , ಕೆಲಸದವರೆಂದು ಮೇಲು-ಕೀಳು ಎಂದು ಭೇದ-ಭಾವ ಮಾಡದ ನಮ್ಮ ಮನೆಯಲ್ಲಿ ಈ ಸ್ಟೀಲ್ ಲೋಟ ಸಿದ್ಧಯ್ಯನಿಗೆ ಮಾತ್ರ ಮೀಸಲಾಗಿದ್ದಿದ್ದು ಒಂದು ಹಾಸ್ಯ ಘಟನೆ , ಅದನ್ನು ತಿಳಿಯಲು ಕೊನಯವರೆಗೂ ಓದಿ ....

ಈ ಘಟನೆ ಸ್ಮ್ರತಿಪಟಲದಲ್ಲಿ ಕೆಲವೊಮ್ಮೆ ಬರುತ್ತಿತ್ತಾದರೂ ಇಲ್ಲಿ ಅಕ್ಷರಗಳಿಗೆ ಇಳಿಸುವಷ್ಟು ಧ್ರಢವಾಗಿರಲಿಲ್ಲ . ಈತ್ತೀಚೆಗೆ ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರಾದ "ವಸುಧೇಂದ್ರ" ರ ಹಂಪಿ express ನಲ್ಲಿ ಬರುವ ಸೀಳು ಲೋಟ ಕಥೆಯನ್ನು ಓದುತಿದ್ದೆ , ಅದೇ ಈ ಬರಹಕ್ಕೆ ಪ್ರೇರಣೆ .. ವಸುಧೆಂದ್ರರು ಮನೀಷೆ , ಯುಗಾದಿ,ಚೇಳು, ಹಂಪಿ express ಮೊದಲಾದ ಕಥಾಸಂಕಲನಗಳನ್ನೂ , ಕೋತಿಗಳು , ನಮ್ಮಮ್ಮ ಅಂದ್ರೆ ನಂಗಿಷ್ಟ ,ರಕ್ಷಕ ಅನಾಥ ಮೊದಲಾದ ಪ್ರಬಂಧ ಸಂಕಲನಗಳನ್ನು ಬರೆದಿರುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ,ಮಾಸ್ತಿ ಕಥಾ ಪುರಸ್ಕಾರ ,ಬೇಂದ್ರೆ ಪುಸ್ತಕ ಬಹುಮಾನ ,ವರ್ಧಮಾನ ಉದಯೋನ್ಮುಖ , ಕಥಾರಂಗಂ ಮೊದಲಾದ ಪ್ರಶಸ್ತಿಗಳನ್ನು ತಮ್ಮ ವಿಭಿನ್ನ ಶ್ಯೆಲಿಯ ಬರಹಗಳಿಗೆ ಪಡೆದಿದ್ದಾರೆ. ನನ್ನ ಈ ಚಿಕ್ಕ ಬರಹ ಅವರಿಗೆ ಅರ್ಪಣೆ ..

ಅಂದ ಹಾಗೆ ಮೂಲ ವಿಷಯಕ್ಕೆ ಬರೋಣ, ಕಥಾವಸ್ತುವಾದ ಈ ಉದ್ದದ , ಬುಡ ಅಪ್ಪಚ್ಚಿಯಾಗಿದ್ದ ಈ ಸ್ಟೀಲ್ ಲೋಟ ತನ್ನ ಮೂಲ ಆಕ್ರತಿಯಲ್ಲಿದ್ದಾಗ ಒಮ್ಮೆ ಸಿದ್ಧಯ್ಯನಿಗೆ ಅಮ್ಮ ಕಾಫಿ ಮಾಡಿ ಗೆದ್ದೆಗೆ ಕಳುಹಿಸಿದ್ದರಂತೆ , ಅವತ್ತು ಅವನು ಆಕಸ್ಮಾತ್ ಆಗಿ ಎಮ್ಮೆಯ ಕಾಲಿಗೆ ಸಿಕ್ಕಿ ಲೋಟ ಅಪ್ಪಚ್ಚಿ ಆಗೋಕೆ ದಾರಿ ಮಾಡಿದ್ದ. ಯಾರೋ ಅವನಿಗೆ ಅದಕ್ಕೋಸ್ಕರ ತಮಾಷೆ ಮಾಡಿದ್ದರಂತೆ ಆ ದಿನ. ಆಮೇಲೆ ಅವನೇ ಸ್ವಪ್ರೇರಣೆಯಿಂದ ಅದೇ ಲೋಟದಲ್ಲಿ ಕಾಫಿ ಕೇಳಿ ಪಡೆಯುತಿದ್ದನಂತೆ. ಹೀಗೆ ನಮ್ಮ ಮನೆಯ ಸ್ಟೀಲ್ ಲೋಟವೊಂದು ಸಿದ್ಧಯ್ಯನ patent ಗೆ ಒಳಪಟ್ಟಿತ್ತು. ಸಿದ್ಧಯ್ಯ ಇಂದು ತನ್ನ ಬಾಳ ಮುಸ್ಸಂಜೆಯಲ್ಲಿದ್ದು ಕೆಲಸ ಬಿಟ್ಟು ದಶಕದ ಮೇಲೇ ಆಗಿದೆ , ಸಿದ್ಧಯ್ಯನ ಮುಖೇನ ಎಮ್ಮೆ ತುಳಿತಕ್ಕೆ ಒಳಗಾಗಿ ಅಪ್ಪಚ್ಚಿಯಾದ ಲೋಟ ಇಂದು ಎಲ್ಲೋ ಕಳೆದು ಹೋಗಿದೆ.

Wednesday, October 20, 2010

ಹೈಫನ್ ಹಾಕಿ

ಅದು ನಮ್ಮ ೮ನೆ ತರಗತಿಯ ಆರಂಭದ ದಿನಗಳು.ಬೇರೆ ಬೇರೆ ಪ್ರಾಥಮಿಕ ಶಾಲೆಗಳಿಂದ ಬಂದತಹ ನಾವೆಲ್ಲರೂ ಮಿತ್ರರಾಗುತಿದ್ದ ಸಂದರ್ಭ. ತರಗತಿಯ ೪ನೆ ಬೆಂಚಿನ ಮಧ್ಯದಲ್ಲಿ ನನ್ನ ಗೆಳೆಯ ಅವಿನಾಶ್ ಜಿ., ಅವನ ಎಡಭಾಗದಲ್ಲಿ ನಾನು ಬಲಭಾಗಕ್ಕ ಇನ್ನೊಬ್ಬ ಗೆಳೆಯ ನಿತಿನ್ ಕುಮಾರ್ ಕೂರುತಿದ್ದ. high ಸ್ಕೂಲ್ ಆರಂಭದ ದಿನಗಳಾದುದರಿಂದ ನಮಗೆಲ್ಲರಿಗೂ ಚೆಂದವಾಗಿ ತಪ್ಪಿಲ್ಲದೆ notes ಬರೆದುಕೊಳ್ಳುವ ಉಮ್ಮಸ್ಸು.

ಅದೊಂದು ದಿನ ಮಧ್ಯಾಹ್ನ ನಮ್ಮ ವಿಜ್ಞಾನ ಮೇಡಂ notes ಕೊಡುತಿದ್ದರು. ಯಾವುದೊ ಎರಡು ಪದಗಳ ಮಧ್ಯೆ "ಹೈಫನ್" ಅಂದರು. ನಮ್ಮ ಮೂವರಿಗೂ ಆ ಕ್ಷಣವಷ್ಟೇ ಈ "ಹೈಫನ್" ಪ್ರಪ್ರಥಮವಾಗಿ ಪರಿಚಯವಾಗಿದ್ದು, ನಾವು ಪ್ರಪ್ರಥಮವಾಗಿ ಕೇಳಿಸಿಕೊಂಡದ್ದು (ನಮ್ಮ ಜೀವಮಾನದಲ್ಲಿ).ಮೂವರು ಮುಖ ಮುಖ ನೋಡಿಕೊಂಡರೂ ಯಾರಿಗೂ ಏನೂ ಹೊಳೆಯಲಿಲ್ಲ. ಮೇಡಂ ರಭಸದಲ್ಲಿ notes ಕೊಡುತಿದ್ದರಿಂದ ನಾನು ಸ್ವಲ್ಪ ಜಾಗ ಬಿಟ್ಟು ಮುಂದೆ ಹೋದೆ. ತರಗತಿ ಮುಗಿದ ಮೇಲೆ ವಿಚಾರಿಸಿದಾಗ ಗೆಳೆಯ ನಿತಿನ್ ಕೂಡ ಗೊತ್ತಾಗದೆ ನನ್ನ ಹಾಗೆ ಜಾಗ ಬಿಟ್ಟಿದ್ದ. ಆದರೆ ನಮ್ಮ ಅವಿನಾಶ್ ಜಿ. ತಲೆ ಉಪಯೋಗಿಸಿ ಮೇಡಂ ಹೈಫನ್ ಅಂತ ಹೇಳಿದ ಜಾಗದಲ್ಲಿ ಎರಡು ಪದಗಳ ಮಧ್ಯೆ "ಹೈಫನ್ ಹಾಕಿ" ಅಂತ ಅಕ್ಷರದಲ್ಲಿ ಬರೆದಿದ್ದ. ಆಮೇಲೆ ಬೇರೆಯವರಲ್ಲಿ ವಿಚಾರಿಸಿದಾಗ ನಮಗೆ ಈ ಹೈಫನ್ ಒಂದು symbol (-) ಅಂತ ಗೊತ್ತಾಗಿದ್ದು. ಈಂದಿಗೂ ಕೂಡ ಏನಾದರೂ ಬರೆಯುವಾಗ ಈ "-" ಬಂದಾಗಲೆಲ್ಲ ಆ ಘಟನೆ ನೆನಪಾಗುತ್ತದೆ. ಮುಖದಲ್ಲಿ ಕಿರುನಗೆ ಅರಳುತ್ತದೆ.

ಈ ಬರಹ high ಸ್ಕೂಲ್ ಅಲ್ಲಿ ನನ್ನ ಮಿತ್ರರಾಗಿದ್ದ ಆ ಅವಿನಾಶ್ ಜಿ.(ಹೈಫನ್ ಮಹಾನುಭಾವ) ಮತ್ತು ನಿತಿನ್ ಗೆ ಅರ್ಪಣೆ. ಅಂದ ಹಾಗೆ ಇಂದು ನಿತಿನ್ ಪಾಂಡಿಚೇರಿಯಲ್ಲಿ ಖ್ಯಾತ ವೈದ್ಯ, ಅವಿನಾಶ್ ಕರ್ನಾಟಕ ಪೋಲಿಸ್ ಪಡೆಯಲ್ಲಿ ಶಿಸ್ತಿನ ಸಿಪಾಯಿ.